ಬಿಗೋನಿಯ - 
ಬಿಗೋನಿಯೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ. ತೋಟಗಾರಿಕೆಯಲ್ಲಿ ಪ್ರಮುಖವೆನಿಸಿರುವ ಸಸ್ಯಗಳ ಪೈಕಿ ಇದೂ ಒಂದು. ಸುಂದರವಾದ ಹೂಗಳಿಂದಾಗಿ ಮಾತ್ರವಲ್ಲದೆ, ಆನೆಕಿವಿ ಆಕಾರದ ಚೆಲುವಾದ ಎಲೆಗಳಿಂದಾಗಿ ಕೂಡ ಇದು ಜನಪ್ರಿಯ ಸಸ್ಯವೆನಿಸಿದೆ. ಇದರಲ್ಲಿ ಸುಮಾರು 400-500 ಪ್ರಭೇದಗಳುಂಟು. ಉದ್ಯಾನಗಾರಿಕೆಯ ದೃಷ್ಟಿಯಲ್ಲಿ ಇವನ್ನು ನಾಲ್ಕು ಪ್ರಧಾನ ಗುಂಪುಗಳಾಗಿ ವಿಂಗಡಿಸಲಾಗಿದೆ: 1. ಸೋಕೊಟ್ರಾನ ಅಥವಾ ಸೆಮಿಟ್ಯೂಬರಸ್ ಬೇರು ಉಳ್ಳವು; 2. ಗೆಡ್ಡೆ ಬೇರು ಪಡೆದಂಥವು (ಟ್ಯೂಬರಸ್); 3. ಎಲೆಗುಂಪಲು ಬಗೆ (ಫೋಲಿಯೇಜ್); 4. ತಂತು ಬೇರುಗಳುಳ್ಳವು (ಫೈಬ್ರಸ್ ರೂಟೆಡ್). ಇವುಗಳ ಪೈಕಿ ಮೊದಲ ಮೂರು ಬಗೆಗಳನ್ನು ಕುಂಡಗಳಲ್ಲಿ ಬೆಳೆಸುತ್ತಾರಾದರೆ ಕೊನೆಯದನ್ನು ಪಾತಿಗಳಲ್ಲಿ (ಬೆಡ್ಡಿಂಗ್) ಬೆಳೆಸುವುದಿದೆ. ಎಲೆಗುಂಪಲು ಬಗೆಯವಕ್ಕೆ ರೆಕ್ಸ್ ಬಿಗೋನಿಯಗಳು ಎಂದೂ ತಂತು ಬೇರುಳ್ಳವಕ್ಕೆ ಸೆಂಪರ್‍ಫ್ಲೋರೆನ್ಸ್ ಎಂದೂ ಹೆಸರುಂಟು. ಪ್ರತಿಯೊಂದು ಗುಂಪಿನಲ್ಲೂ ಅತ್ಯಂತ ಮುಖ್ಯವೆನಿಸಿರುವ ಉದ್ಯಾನ ತಳಿಗಳುಂಟು. ಉದಾಹರಣೆಗೆ ಮೊದಲನೆಯ ಗುಂಪಿನಲ್ಲಿ ಸೋಕೊಟ್ರಾನ, ಗ್ಲಾಯ್ರ್ ಡ ಲೊರೇನ್, ಟ್ರಯಂಫ್‍ಡ ಲೆಮಾಯ್ನ್ ಎಂಬವೂ ಎರಡನೆಯ ಗುಂಪಿನಲ್ಲಿ ಡೇವಿಸಿಯೈ, ಬೊಲೀವಿಯೆನ್ಸಿಸ್, ಪಿಯರ್ಸಿಯೈ, ಗ್ರಾಸಿಲಿಸ್, ಫಲ್ಗೆನ್ಸ್, ಟ್ಯೂಬರ್‍ಹೈಬ್ರಿಡ ಎಂಬವೂ ಮೂರನೆಯ ಗುಂಪಿನಲ್ಲಿ ಗ್ಲಾಕೊಫಿಲ, ಸ್ಕಾಂಡೆನ್ಸ್, ರೆಕ್ಸ್, ರಾಜಾ, ಮ್ಯಾಗ್ನೆಫಿಕ, ಎಂಬವೂ ಕೊನೆಯ ಗುಂಪಿನಲ್ಲಿ ಸೆಂಪರ್‍ಪ್ಲೋರೆನ್ಸ್, ಫ್ಯೂಕ್ಸಿಯಾಯ್ಡಿಸ್ ಇನ್ ಕಾರ್ನೇಟ, ಹಾಗೀನ, ನೈಟೆಡ, ಕಾಕ್ಸೀನಿಯ, ಲೂಸರ್ನ್ ಮುಂತಾದವೂ ಪ್ರಸಿದ್ಧವಾಗಿದೆ.

ಎಲ್ಲ ಬಗೆಯ ಬಿಗೋನಿಯಗಳೂ ರಸಭರಿತ, ಮಾಂಸಲ, ಮೂಲಿಕೆಗಳು ಇಲ್ಲವೆ ಪೊದೆಸಸ್ಯಗಳು. ಕೆಲವು ಬಗೆಗಳಲ್ಲಿ ಕಾಂಡ ಗೆಡ್ಡೆಯಂತೆ ಇಲ್ಲವೆ ಪ್ರಕಂದದಂತೆ ರೂಪುಗೊಂಡಿವೆ. ಎಲೆಗಳು ಸರಸ, ಪರ್ಯಾಯ ಮಾದರಿಯಲ್ಲಿ ಜೋಡಣೆ ಗೊಂಡಿರುವುವು. ಸಾಮಾನ್ಯವಾಗಿ ಎಲೆಗಳ ಒಂದು ಪಾಶ್ರ್ವ ಇನ್ನೊಂದಕ್ಕಿಂತ ಕಿರಿದಾಗಿದ್ದು ಇಡೀ ಎಲೆ ಹೆಚ್ಚುಕಡಿಮೆ ಆನೆ ಕಿವಿಯಂತೆ ಕಾಣುವುದು. ಎಲೆಯ ಅಂಚು ನಯ ಇಲ್ಲವೆ ದಂತಿತ ಅಥವಾ ಹಾಲೆಗಳಾಗಿ ವಿಂಗಡಣೆಗೊಂಡಿದೆ. ಹೂಗಳು ಗಂಡು, ಹೆಣ್ಣು ಬೇರೆ ಬೇರೆ. ಎಲೆಗಳ ಕಕ್ಷಗಳಲ್ಲಿ ಸೈಮೋಸ್ ಮಾದರಿಯ ಗೊಂಚಲುಗಳಲ್ಲಿ ಸ್ಥಿತವಾಗಿರುವುವು. ಹೆಣ್ಣು ಹೂವಿನಲ್ಲಿ 5 ದಳಗಳೂ ಗಂಡು ಹೂವಿನಲ್ಲಿ 4 ದಳಗಳೂ ಉಂಟು. ದಳಗಳ ಬಣ್ಣ ಕೆಂಪು, ಬಿಳಿ, ಗುಲಾಬಿ, ಹಳದಿ ಹೀಗೆ ವೈವಿಧ್ಯಮಯ. ಫಲ 1-3 ರೆಕ್ಕೆಗಳುಳ್ಳ ಸಂಪುಟ ರೀತಿಯದು. ಬೀಜಗಳು ಅಸಂಖ್ಯ, ಗಾತ್ರದಲ್ಲಿ ಬಲು ಸೂಕ್ಷ್ಮ.

ಬಿಗೋನಿಯಗಳನ್ನು ಗೆಡ್ಡೆ, ಕಾಂಡ, ಎಲೆ ತುಂಡುಗಳಿಂದ ಹಾಗೂ ಬೀಜಗಳಿಂದ ವೃದ್ಧಿಸಲಾಗುತ್ತದೆ. ಮರಳು ಮಿಶ್ರಿತಗೋಡು ಇವುಗಳ ಬೆಳೆವಣಿಗೆಗೆ ಉತ್ತಮ. ಅತಿ ಬಿಸಿಲನ್ನು ಇವು ಸಹಿಸವು. ಬೆಳಗಿನ ಎಳೆ ಬಿಸಿಲಿಗೆ ಒಡ್ಡಿದರೆ ಬೆಳೆವಣಿಗೆ ಹುಲುಸಾಗಿರುವುದು. ಉಳಿದಂತೆ ನೆರಳು ಬೇಕು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ